ಚಿಕ್ಕನಾಯಕನಹಳ್ಳಿ,ಮೇ.2: ಹೇಮಾವತಿ ನಾಲೆಯಿಂದ ತಾಲೂಕಿನ ಜಲಾಶಯವೆಂದೇ ಹೆಸರು ಪಡೆದಿರುವ ಬೋರನಕಣಿವೆಗೆ ನೀರು ಹರಿಸಬೇಕೇಂದರೆ ಕನಿಷ್ಟ 3ಟಿ.ಎಂ.ಸಿ. ನೀರು ಅಗತ್ಯವಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತುಮಕೂರು ಜಿಲ್ಲೆಗೆ ಹೇಮಾವತಿ ನಾಲೆಯಿಂದ 31 ಟಿ.ಎಂ.ಸಿ ನೀರನ್ನು ಬಳಸಿಕೊಳ್ಳಲು ಅವಕಾಶವಿದ್ದು, ಇದರಲ್ಲಿ ನಾವು ಬಳಸಿಕೊಂಡಿರುವುದು ಕೇವಲ 21 ಟಿ.ಎಂ.ಸಿ.ಮಾತ್ರ, ಉಳಿದ 10 ಟಿ.ಎಂ.ಸಿ.ಯನ್ನು ನಾವು ಬಳಸಿಕೊಳ್ಳಲು ಅವಕಾಶವಿದ್ದು, ಇದನ್ನು ನಾವು ಸರಿಯಾದ ರೀತಿಯಲ್ಲಿ ಸದ್ವಿನಿಯೋಗಿಸಿಕೊಂಡರೆ ಈಗಿರುವ ದೂರಕ್ಕಿಂತ ಇನ್ನೂ 240 ಕಿ.ಮೀ.ಗೂ ಹೆಚ್ಚು ದೂರು ನೀರನ್ನು ತೆಗೆದುಕೊಂಡು ಹೋಗಬಹುದು ಎಂದ ಅವರು, ಆಗ ಕುಣಿಗಲ್ ಒಂದೇ ಏನು ಇಡೀ ಜಿಲ್ಲೆಯ ಬಹುತೇಕ ಭಾಗಕ್ಕೆ ನೀರು ಹರಿಸಬಹದು ಎಂದರಲ್ಲದೆ, ನಾವೀಗ ಉಳಿಕೆ 10 ಟಿ.ಎಂ.ಸಿ.ನೀರನ್ನು ಬಳಸಿಕೊಳ್ಳುವಲ್ಲಿ ಸೋತಿದ್ದೇವೆ ಎಂದರು. ಈ ಬಗ್ಗೆ ಚಿಂತನೆ ನಡೆಸಬೇಕಾಗಿರುವುದು ಈ ಜಿಲ್ಲೆಯ ಶಾಸಕರೆಲ್ಲರ ಕರ್ತವ್ಯ, ಅದನ್ನು ಬಿಟ್ಟು ಅಲ್ಲಿಗೆ ನೀರು ಹರಿಸಬೇಡಿ, ಇಲ್ಲಿಗೆ ನೀರು ಹರಿಸಬೇಡಿ ಎಂದೇಳುವ ಮೂಲಕ ಜಿಲ್ಲೆಯ ಕೆಲವು ಶಾಸಕರು ಜನರನ್ನು ಗೊಂದಲಕ್ಕೆ ಈಡುಮಾಡುತ್ತಿದ್ದಾರೆ ಎಂದರು.
ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ಹೇಮಾವತಿಯಿಂದ ಮಂಜೂರಾಗಿರುವ ನೀರಿನ ಪಾಲು ಕೇವಲ 0.06 ಟಿ.ಎಂ.ಸಿ.ಮಾತ್ರ, ಇದರಲ್ಲಿ ಇಲ್ಲಿಯವರು ಬಳಸಿಕೊಂಡಿರುವುದು 0.04 ಟಿ.ಎಂ.ಸಿ.ಮಾತ್ರ ಎಂದ ಅವರು, ಇಲ್ಲೂ ಸಹ 0.02 ಟಿ.ಎಂ.ಸಿ. ನೀರನ್ನು ಬಳಸಿಕೊಳ್ಳುವಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಂಡಿಲ್ಲ ಎಂದರಲ್ಲದೆ, ಕೇವಲ 0.02 ಟಿ.ಎಂ.ಸಿ.ಯನ್ನು ಇಟ್ಟುಕೊಂಡು ಬೋರನಕಣಿವೆಗೆ ನೀರು ಹರಿಸುತ್ತೇವೆಂದು ಹೇಳುವ ಜನರು ನೀರಾವರಿಯ ಬಗ್ಗೆ ಆಳವಾದ ಜ್ಞಾನವನ್ನು ಹೊಂದುವುದು ಅಗತ್ಯ ಎಂದರು.
ಈ ಭಾಗಕ್ಕೆ ಒಂದು ಟಿ.ಎಂ.ಸಿ.ಗಿಂತ ಹೆಚ್ಚು ನೀರು ತರುತ್ತೇನೆಂದು ಹೇಳುವ ಹೋರಾಟಗಾರರನ್ನು ಇಲ್ಲಿಯ ಜನ ನಂಬಬೇಕೆ ಹೊರತು ಕೇವಲ 'ಸೊನ್ನೆ ಪಾಯಿಂಟ್ ಸಮತಿಂಗ್' ನೀರು ತರುವೆ ಎನ್ನುವ ಜನರ ಮಾತುಗಳಿಗೆ ಮರುಳಾಗಬೇಡಿ ಎಂದರು.
ಬೋರನಕಣಿವೆಗೆ ಅಗತ್ಯವಿರುವಷ್ಟು ನೀರನ್ನು ನಾವು ಗುಂಡ್ಯಾಯೋಜನೆಯಿಂದ ತರುವ ಪ್ರಯತ್ನವನ್ನು ಮಾಡಲಾಗುವುದು ಎಂದ ಅವರು, ಈ ಯೋಜನೆಯ ಬಗ್ಗೆ ಕಸರತ್ತು ಮಾಡಿತ್ತಿದ್ದು, ಈ ಯೋಜನೆಗೆ ಅಗತ್ಯವಿರುವ ರೂಪುರೇಷೆಯನ್ನು ಪೂರ್ಣಗೊಳಿಸದ ನಂತರ ನಾನು ಗುಂಡ್ಯಾಯೋಜನೆಯ ಬಗ್ಗೆ ಮಾತನಾಡುವುದಾಗಿ ತಿಳಿಸಿದರು.
ಹೇಮಾವತಿ ನೀರು ಚಿ.ನಾ.ಹಳ್ಳಿ ಹರಿಯುವ ಸಂಬಂಧ ಈ ಹಿಂದೆ ವ್ಯತಿರಿಕ್ತವಾದ ಹೇಳಿಕೆಯನ್ನು ನೀಡಿದ್ದೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಕ್ಷಣಕಾಲ ವಿಚಲಿತರಾದಂತೆ ಕಂಡು ಬಂದ ಟಿ.ಬಿ.ಜೆ, ನಾನು ಹೇಳಿರುವುದು ತಿಪಟೂರಿನ ಹೊನ್ನವಳ್ಳಿ ಹಾಗೂ ಸುತ್ತಮುತ್ತಲಿನ ಕೆರೆಗಳಿಗೆ ಹಾಗೂ ಕುಣಿಗಲ್ನ ಕೆಲವು ಕೆರೆಗಳಿಗೆ ನೀರು ಹರಿಸಲು ತೊಂದರೆ ಇಲ್ಲಾ ಎಂದರೆ ಚಿ.ನಾ.ಹಳ್ಳಿಗೂ ನೀರು ಹರಿಸಲು ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದೇನೆ ಹೊರತು ಬೇರೆ ಅರ್ಥ ಬರುವಂತೆ ಹೇಳಿಲ್ಲವೆಂದು ಸ್ಪಷ್ಟಪಡಿಸಿದರು.
ನನ್ನ ರಾಜಕೀಯ ಜೀವನ ಆರಂಭವಾಗಿ 33 ವರ್ಷ ತುಂಬಿದೆ ಇದರಲ್ಲಿ 20 ವರ್ಷಗಳ ಕಾಲ ನಾನು ನೀರಾವರಿಗಾಗಿಯೇ ಹೋರಾಟ ಮಾಡಿದ್ದೇನೆ. ಈ ತಾಲೂಕಿಗೆ ಹೇಮಾವತಿಯೂ ಬರಲಿ ಹಾಗೂ ಬೇರೆ ಮಾರ್ಗಗಳಿಂದಲೂ ನೀರು ಬರಲಿ ಎಂದು ಹೋರಾಟ ಮಾಡಿದ ಕುರುಹುಗಳು ಹುಳಿಯಾರಿನಲ್ಲಿ ಇನ್ನೂ ಇದೆ ಎಂದರು.
ಹೊಗೆನಿಕಲ್ ಬಗ್ಗೆ ಸಚಿವರಲ್ಲೇ ಗೊಂದಲ: ಈ ರಾಜ್ಯದ ಜಲದ ವಿಷಯದಲ್ಲಿ ಇಲ್ಲಿನ ಸಂಪುಟ ಸಚಿವರಿಗೆ ಸ್ಪಷ್ಟ ಅರಿವಿಲ್ಲ ಎಂದ ಟಿ.ಬಿ.ಜಯಚಂದ್ರ, ಗೃಹ ಸಚಿವರು ಒಂದರೀತಿಯ ಹೇಳಿಕೆ ನೀಡುತ್ತಾರೆ, ಜಲ ಸಂಪನ್ಮೂಲ ಸಚಿವರು ಮತ್ತೊಂದು ರೀತಿಯ ಹೇಳಿಕೆ ನೀಡುತ್ತಾರೆ ಎಂದ ಅವರು, ಸುಪ್ರಿಂ ಕೋಟರ್್ನಲ್ಲಿ ಇರುವ ವಿಷಯದ ಬಗ್ಗೆ ವಿಭಿನ್ನವಾದ ಹೇಳಿಕೆ ನೀಡಿ ಗೊಂದಲವನ್ನು ಏರ್ಪಡಿಸುವ ಈ ರಾಜ್ಯದ ಸಚಿವರುಗಳಿಗೆ ಇದರ ಪರಿಣಾಮ ಏನಾಗುತ್ತದೆ ಎಂದು ಜವಬ್ದಾರಿ ಸ್ಥಾನದಲ್ಲಿರುವವರಿಗೆ ತಿಳಿಯುವುದಿಲ್ಲವೇ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ.ಸದಸ್ಯ ಸೀಮೆಣ್ಣೆ ಕೃಷ್ಣಯ್ಯ, ಮುಖಂಡ ಕಿಬ್ಬನಹಳ್ಳಿ ಮಹಾಲಿಂಗಯ್ಯ, ನಗರ ಘಟಕದ ಅಧ್ಯಕ್ಷ ಕೆ.ಜಿ.ಕೃಷ್ಣೇಗೌಡ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ಬೀರಲಿಂಗಯ್ಯ ಉಪಸ್ಥಿತರಿದ್ದ
No comments:
Post a Comment