Monday, February 21, 2011


ಜಮೀನು ವಿವಾದಕ್ಕೆ ಬೆಂಕಿಗಾಹುತಿಯಾದ ಒಂದೇ ಕುಟುಂಬದ ಐವರು.
ಚಿಕ್ಕನಾಯಕನಹಳ್ಳಿ,ಫೆ.19: ಕುಟುಂಬದಲ್ಲಿನ ಜಮೀನಿನ ವಿವಾದದಿಂದಾಗಿ ಒಂದೇ ಕುಟುಂಬದ 5 ಜನ ಸಜೀವ ದಹನವಾದರೆ, ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೊಯ್ಯಲಾಗಿದೆ. ಈ ಘಟನೆ ತಾಲೂಕಿನ ಗೋಡೆಕೆರೆಯ ಸೊಂಡೆನಹಳ್ಳಿಯ ಯಾದವರಹಟ್ಟಿಯ ತೋಟದ ಮನೆಯಲ್ಲಿ ನಡೆದಿದೆ.
ಘಟನೆಯಲ್ಲಿ ಜುಂಜಮ್ಮ(75), ಕೃಷ್ಯಯ್ಯ(60), ಶಿವಮ್ಮ(40), ಜೀವಂತ್(7), ಹೇಮಂತ್(2) ಸಜೀವ ದಹನಗೊಂಡಿದ್ದರೆ, ಕೃಷ್ಣಯ್ಯನ ಮಗ ಜಗದೀಶ್(25) ಎಂಬುವವನನ್ನು ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.
ಘಟನೆಗೆ ಕಾರಣ: ಇಡೀ ಘಟನೆಗೆ ಜಮೀನಿನ ವಿವಾದವೇ ಕಾರಣವೆನ್ನಲಾಗಿದ್ದು, ಮೃತ ಕೃಷ್ಣಯ್ಯನ ಮಾವ ಚಿಕ್ಕಣ್ಣ ಮತ್ತು ಜುಂಜಮ್ಮ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬಾಕೆ ಹಲವು ವರ್ಷಗಳ ಹಿಂದೆಯೇ ಮರಣಹೊಂದಿದ್ದರು, ಚಿಕ್ಕಣ್ಣನ ಎರಡನೇ ಮಗಳು ಶಿವಮ್ಮನಿಗೆ ತಿಪಟೂರು ತಾಲೂಕಿನ ಕೃಷ್ಣಯ್ಯನೊಂದಿಗೆ ಮದುವೆ ಮಾಡಿ, ಮನೆಯ ಅಳಿಯನನ್ನಾಗಿ ಮಾಡಿಕೊಳ್ಳಲಾಗಿತ್ತು. ಕೃಷ್ಣಯ್ಯನ ಅತ್ತೆ, ಈ ಘಟನೆಯಲ್ಲಿ ಮೃತಳಾಗಿರುವ ಜುಂಜಮ್ಮನೊಂದಿಗೆ ಸೊಂಡೆನಹಳ್ಳಿಯ ತೋಟದ ಮನೆಯಲ್ಲಿ ಕುಟುಂಬ ಊಡಿದ್ದು ಚಿಕ್ಕಣ್ಣನ ಸಂಬಂಧಗಳಿಗೆ ಸಮಾಧಾನ ತಂದಿರಲಿಲ್ಲ, ಚಿಕ್ಕಣ್ಣನ ಮರಣಾನಂತರ ಈ ಶೀತಲ ಸಮರ ಕಳೆದ 20 ವರ್ಷಗಳಿಂದ ನಡೆಯುತ್ತಿತ್ತು. ಈ ಮಧ್ಯೆ ಚಿಕ್ಕಣ್ಣನಿಗೆ ಗಂಡು ಸಂತಾನವಿಲ್ಲದಿದ್ದರಿಂದ ಅವರಿಗಿದ್ದ 10 ಎಕರೆ ಜಮೀನನ್ನು ಲಪಟಾಯಿಸಬೇಕೆಂದು ಚಿಕ್ಕಣ್ಣನ ಸಂಬಂಧಿಗಳು ಹೊಂಚು ಹಾಕುತ್ತಿದ್ದರು,
ಕೃಷ್ಣಯ್ಯನಿಗೆ ಇಬ್ಬರು ಗಂಡು ಮಕ್ಕಳು ಮೂವರು ಹೆಣ್ಣು ಮಕ್ಕಳು. ಇದರಲ್ಲಿ ಕೃಷ್ಣಯ್ಯನ ಮಗ ನಾಗೇಶ್ ಜಮೀನಿನ ವಿಷಯವಾಗಿ ತಂದೆಯೊಂದಿಗೆ ಜಗಳವಾಡಿಕೊಂಡು ಬೆಂಗಳೂರಿಗೆ ಹೋಗಿದ್ದ, ಈ ಸಂದರ್ಭವನ್ನೇ ಹೊಂಚು ಹಾಕುತ್ತಿದ್ದ ಮಠದ ತಮ್ಮಯ್ಯ, ಜಂಜಪ್ಪ, ಹಾಗೂ ಮಗ ಜಂಜಯ್ಯ, ಬಸವರಾಜ ನಾಗೇಶ್ನ ಜೊತೆಗೂಡಿ ಈ ಕೃತ್ಯ ಎಸೆಗಿರಬಹುದು ಎಂದು ಕೃಷ್ಣಯ್ಯನ ಹೆಣ್ಣು ಮಕ್ಕಳಾದ ರಾಧಮ್ಮ, ರತ್ನಮ್ಮ ಪತ್ರಿಕೆಗೆ ತಿಳಿಸಿದ್ದಾರೆ.
ಘಟನೆಯಲ್ಲಿ ಮರಣ ಹೊಂದಿರುವ ಜೀವಂತ್ ಕೃಷ್ಣಯ್ಯನ ಎರಡನೇ ಮಗಳಾದ ರಾಧಮ್ಮನ ಮಗ, ಈತ ತಾತನ ಮನೆಯಲ್ಲಿಯೇ ಇದ್ದು ಎರಡನೇ ತರಗತಿಯಲ್ಲಿ ಓದುತ್ತಿದ್ದರೆ, ಕೊನೆಯ ಮಗಳು ಲತಾಳ ಮಗ ಎರಡು ವರ್ಷದ ಹೇಮಂತನು ಘಟನೆಯ ಹಿಂದಿನ ದಿನ ಅವರ ತಾಯಿ ತವರು ಮನೆಯಾದ ಕೃಷ್ಣಯ್ಯನ ಮನೆಯಲ್ಲಿ ಬಿಟ್ಟಿದ್ದರು. ಕೃಷ್ಣಯ್ಯನ ಮೂರು ಜನ ಹೆಣ್ಣು ಮಕ್ಕಳು ಕೃಷ್ಣಯ್ಯನ ಮೊದಲ ಮಗಳಾದ ರತ್ನಮ್ಮ ವಾಸವಿದ್ದ ಸೊಂಡೆನಹಳ್ಳಿಯ ಊರೊಳಗಿನ ಮನೆಯಲ್ಲಿ ಮಲಗಿದ್ದರಿಂದ ಇವರು ಜೀವಂತವಾಗಿದ್ದಾರೆ.
ಈ ಘಟನೆ ಶನಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ನಡೆದಿರಬಹುದೆಂದು ಊಹಿಸಲಾಗಿದ್ದು, ಕೃಷ್ಣಯ್ಯನ ಮನೆಗೆ ಹೊರಗಿನಿಂದ ಬೀಗ ಹಾಕಿ ಡೀಸೆಲ್ ಸುರಿದು ಬೆಂಕಿ ಹಚ್ಚಲಾಗಿದೆ. ಇದರಿಂದಾಗಿ ಸಾವಿನ ಪ್ರಮಾಣ ಹೆಚ್ಚಿದೆ. ಇದೊಂದು ಹೃದಯ ವಿದ್ರಾವಕ ಘಟನೆಯಾಗಿದೆ.
ಘಟನೆಯ ಸ್ಥಳಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು, ಮಾಜಿ ಶಾಸಕರುಗಳಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ ಕುಮಾರ್, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಎಸ್.ಪಿ. ಡಾ.ಹರ್ಷ ಭೇಟಿ ನೀಡಿದ್ದರು.

No comments:

Post a Comment