Saturday, September 11, 2010

ಫಾಸ್ಟ್ ಪುಡ್ ನಿಂದ ದೂರವಿರಿ ಸೊಪ್ಪು ತರಕಾರಿಯನ್ನು ಸೇವಿಸಿ
ಚಿಕ್ಕನಾಯಕನಹಳ್ಳಿ,ಸೆ.10: ನಾವು ಸೇವಿಸುವ ಆಹಾರವು ಸಮತೋಲನವಾದ ಹಾಗೂ ಸತ್ವ ಭರಿತವಾದ ನಾರಿನ ಅಂಶ ಒಳಗೊಂಡಿರುವ ಆಹಾರವನ್ನು ಸೇವಿಸುವುದರಿಂದ ಮನುಷ್ಯ ಪೌಷ್ಠಿಕವಾಗಿ ಸದೃಡವಾಗಿರುತ್ತಾನೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಅನೀಸ್ಖೈಸರ್ ಹೇಳಿದರು.
ತಾಲೂಕಿನ ಶೆಟ್ಟಿಕೆರೆಯ ಮರುಳ ಸಿದ್ದೇಶ್ವರ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ಆರೋಗ್ಯ ಇಲಾಖೆ ವತಿಯಿಂದ ನಡೆದ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೊಪ್ಪು ತರಕಾರಿಯಿಂದ ಮಾಡಿದ ಆಹಾರವನ್ನು ಸೇವಿಸುವುದರಿಂದ ಕ್ಯಾಲ್ಸಿಯಂ ಅಂಶ ದೇಹಕ್ಕೆ ದೊರೆತು ಶಕ್ತಿ ಹೆಚ್ಚುತ್ತದೆ ಎಂದ ಅವರು, ಭಾಗ್ಯಲಕ್ಷ್ಮಿ ಯೋಜನೆಯಡಿ ಬರುವ ಸವಲತ್ತುಗಳನ್ನು ಪಡೆಯುವ ಬಗ್ಗೆ ವಿವರವಾಗಿ ತಿಳಿಸಿದರು.
ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಅನುಸೂಯಮ್ಮ ಮಾತನಾಡಿ ಮಕ್ಕಳ ಉತ್ತಮ ಆರೈಕೆಯಲ್ಲಿ ತಾಯಂದಿರ ಪ್ರಾಮುಖ್ಯತೆ ಹೆಚ್ಚಿನದು, ಮಕ್ಕಳ ಆರೈಕೆ ಉತ್ತಮವಾಗಿದ್ದಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಮಗು ಆರೋಗ್ಯವಾಗಿರುತ್ತದೆ, 6ತಿಂಗಳ ನಂತರ ಮಗುವಿಗೆ ಬೇಯಿಸಿದ ಆಹಾರವನ್ನು ಕೊಟ್ಟು ಉತ್ತಮ ಆರೈಕೆ ಮಾಡಿದಲ್ಲಿ ಮುಂದೆ ಮಕ್ಕಳ ಭವಿಷ್ಯ ಉತ್ತಮವಾಗಿರುವುದರಲ್ಲಿ ಸಂದೇಹವಿಲ್ಲ ಎಂದರು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಾದ ಪರಮೇಶ್ವರಪ್ಪ, ಪರ್ವತಯ್ಯ ಮಾತನಾಡಿದರು.
ಸಮಾರಂಭದಲ್ಲಿ ಎಂ.ಎನ್.ಮಹದೇವಮ್ಮ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಶಾಶ್ವತ ಪಡಿತರ ಚೀಟಿ ಪಡೆಯಲು ತಹಶೀಲ್ದಾರ್ ಮನವಿ
ಚಿಕ್ಕನಾಯಕನಹಳ್ಳಿ,ಸೆ.10: ನೆಮ್ಮದಿ ಕೇಂದ್ರಕ್ಕಿಂತ ಮೊದಲು ವಿತರಿಸಿರುವ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವ ಹಾಗೂ ಭಾವಚಿತ್ರ ತೆಗೆಸಿಕೊಂಡಿರುವ ಪಡಿತರದಾರರು ಶಾಶ್ವತ ಪಡಿತರ ಚೀಟಿ ಪಡೆದುಕೊಳ್ಳದೇ ಇದ್ದಲ್ಲಿ ತಾಲೂಕು ಕಛೇರಿಯಲ್ಲಿನ ಪಡಿತರ ಚೀಟಿ ವಿತರಣಾ ಕೇಂದ್ರದಲ್ಲಿ ಶಾಶ್ವತ ಪಡಿತರ ಚೀಟಿ ಪಡೆದುಕೊಳ್ಳಲು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ಈಗಾಗಲೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಟ್ಟಿ ಪ್ರಕಟಿಸಿರುವಂತೆ ಖಾಯಂ ಪಡಿತರ ಚೀಟಿಗಳು ಮುದ್ರಿತವಾಗಿ ಬಂದಿದ್ದು ಇದುವರೆವಿಗೂ ಪಡಿತರ ಚೀಟಿ ಪಡೆಯದೇ ಇರುವವರು ಹಾಜರಾಗಿ ಪ.ಚೀಟಿ ಶುಲ್ಕ 15ರೂ ಪಾವತಿಸಿ ಪಡಿತರ ಚೀಟಿ ಪಡೆಯಬಹುದಾಗಿದೆ ಎಂದರು.
ಮೊದಲನೇ ಹಂತದಲ್ಲಿ ವಿತರಿಸಲಾಗಿರುವ ತಾತ್ಕಾಲಿಕ ಬಿಪಿಎಲ್ ಅಕ್ಷಯ, ಎಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರು ಇದುವರೆವಿಗೂ ಭಾವಚಿತ್ರ ತೆಗೆಸದೇ ಇದ್ದಂತವರು ತಾಲೂಕು ಕಛೇರಿಗೆ 45ರೂ ಪಾವತಿಸಿ ಭಾವಚಿತ್ರ ತೆಗೆಸಿಕೊಳ್ಳಬಹುದಾಗಿದೆ. ಪೂರ್ಣ ಕುಟುಂಬದ ಸದಸ್ಯರಿದ್ದಲ್ಲಿ ಒಬ್ಬರು ಭಾವಚಿತ್ರ ತೆಗೆಯಿಸಿ ಉಳಿಕೆ ಸದಸ್ಯರಿದ್ದಲ್ಲಿ ಭಾವಚಿತ್ರ ತೆಗೆಸದೇ ಇರುವವರು ಮಾತ್ರ ಹಾಜರಾಗಿ ಭಾವಚಿತ್ರ ತೆಗೆಸಿಕೊಳ್ಳಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.