Wednesday, March 16, 2016


ಅಕ್ಷರ ದಾಸೋಹದಲ್ಲಿ ಗೋಲ್ಮಾಲ್ ಗ್ರಾಮಸ್ಥರಿಂದ
 ಆರೋಪ 

ಚಿಕ್ಕನಾಯಕನಹಳ್ಳಿ : ಮಕ್ಕಳಿಗೆ ನೀಡುವ ಬಿಸಿಯೂಟದ ದಾಸ್ತಾನಿನಲ್ಲೂ ಗೋಲ್ಮಾಲ್ ಮಾಡಿ, ಅಳತೆಯಲ್ಲಿ ಮೊಸ ಮಾಡುವ ಮೂಲಕ ಅದರಲ್ಲೂ ಹಣ ಸಂಪಾದಿಸುವ ಹುನ್ನಾರ ತಾಲ್ಲೂಕಿನಾದ್ಯಂತ ನಡೆಯುತ್ತಿತ್ತು, ಈಗ ತಾಲೂಕಿನ ಗಂಟಿಗನಪಾಳ್ಯದಲ್ಲಿ ಗ್ರಾಮಸ್ಥರು ಮಾಲು ಸಮೇತ ಹಿಡಿದಿರುವ ಘಟನೆ ನಡೆದಿದೆ. 
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಗಂಟಿಗನಪಾಳ್ಯದಲ್ಲಿರುವ ಕಿರಿಯ ಪ್ರಾಥಮಿಕ ಪಾಠಶಾಲೆಗೆ ಮಕ್ಕಳಿಗೆ ನೀಡುವ ಬಿಸಿಯೂಟಕ್ಕಾಗಿ ಅಕ್ಷರ ದಾಸೋಹದ ವತಿಯಿಂದ ಬೇಳೆ ವಿತರಿಸಲಾಗುತ್ತಿತ್ತು,   ಬಿಸಿಯೂಟಕ್ಕಾಗಿ ಶಾಲೆಗಳಿಗೆ ನೀಡುವ ಬೇಳೆಯು ಸರಬರಾಜಿಗಿಂತ ಕಡಿಮೆ ವಿತರಿಸುತ್ತಿದ್ದದ್ದನ್ನು ಗ್ರಾಮಸ್ಥರು ಕಂಡು ಬೇಳೆಯ ಲಾರಿಯನ್ನು ದಾಸ್ತಾನಿನ ಸಮೇತ ಗ್ರಾಮಸ್ಥರು ಹಿಡಿದು ನಿಲ್ಲಿಸಿ ಅಕ್ಷರ ದಾಸೋಹದ ಹೆಸರಿನಲ್ಲೂ ನಡೆಯುತ್ತಿರುವ ಭ್ರಷ್ಠತೆಯನ್ನು ಖಂಡಿಸಿದ್ದಾರೆ.
ಬೇಡಿಕೆಯ ಪಟ್ಟಿಯಂತೆ ಅಲಾಟ್ಮೆಂಟ್ ಸಂಬಂಧಿಸಿದ ಇಲಾಖೆ ಮಾಡಿದ್ದರೂ, ಶಾಲೆಗಳಿಗೆ ತೂಕಮಾಡಿಕೊಡುವಾಗ ತೂಕದಲ್ಲಿ ಮೋಸಮಾಡಿ ಶಾಲೆಗೆ ಅಕ್ಕಿ-ಬೇಳೆ ಇಳಿಸುವ ಸಂದರ್ಭದಲ್ಲಿ ಗ್ರಾಮಸ್ಥರು ತೂಕದಲ್ಲಿ ಮಾಡುತ್ತಿರುವ ಮೋಸವನ್ನು ಪತ್ತೆಹಚ್ಚಿದ್ದಾರೆ. ಮೋಸ ಸಾಭೀತಾಗುತ್ತಿದ್ದಂತೆಯೇ ಗ್ರಾಮಸ್ಥರು ಮೇಲಧಿಕಾರಿಗಳಿಗೆ ಹಾಗೂ ಮಾಧ್ಯಮದವರಿಗೆ ಮಾಹಿತಿ ನೀಡಿದರು. ಅಕ್ಷರ ದಾಸೋಹದ ಹೆಸರಿನಲ್ಲಿ  ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಕ್ಷರ ದಾಸೋಹವನ್ನಾಗಿಸಿಕೊಂಡು ಮಕ್ಕಳ ಆಹಾರದಲ್ಲೂ ಲೂಟಿ ಮಾಡುತ್ತಿದ್ದಾರೆಂದು ಪೋಷಕರು ಆರೋಪಿಸಿದರು.
 ಶಾಲೆಗೆ ವಿತರಿಸಿಬೇಕಾದ 8ಕೆ.ಜಿ.ಯ ಬೇಳೆಯ ಬದಲು 5.900ಗ್ರಾಂ ಬೇಳೆ ವಿತರಿಸಿದ್ದರು. ಈ ರೀತಿ ಕಡಿಮೆ ಬೇಳೆ ನೀಡುತ್ತಿರುವ ಬಗ್ಗೆ ಪಕ್ಕದ ಶಾಲೆಗಳಲ್ಲೂ ವಿತರಿಸಿದ್ದಾರೆ, ತಾಲೂಕಿನ ಹಲವು ಶಾಲೆಗಳಲ್ಲಿ ಈ ರೀತಿಯ ದೂರುಗಳು ಕೇಳಿಬಂದಿದೆ. ನಿಗಧಿಯಾದ  ಬೇಳೆಗಿಂತ 5ಕೆ.ಜಿ, 3ಕೆ.ಜಿಯಷ್ಟು ಕಡಿಮೆ ಬೇಳೆ ವಿತರಿಸುತ್ತಿದ್ದಾರೆ,  ಲಾರಿಯಲ್ಲಿ ತಂದಿದ್ದ ಬೇಳೆಯ ತೂಕದಲ್ಲಿನ ಮೋಸದ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಗ್ರಾಮಸ್ಥರು ಮಾಧ್ಯಮದವರಿಗೆ ತಿಳಿಸಿದರು.
ಎಸ್.ಡಿ.ಎಂ.ಸಿ ಸದಸ್ಯ ದಯಾನಂದ್ ಮಾತನಾಡಿ, ಬಿಸಿಯೂಟ ಆರಂಭವಾಗಿ ಹಲವಾರು ವರ್ಷಗಳೇ ಕಳೆದಿವೆ ಆದರೆ ಶಾಲೆಗಳಲ್ಲಿ ಬಿಸಿಯೂಟಕ್ಕಾಗಿ ನೀಡುವ ದಾಸ್ತಾನು ಸರಬರಾಜಿನಲ್ಲಿ ಕೆಲವು ಕೆ.ಜಿಗಳಷ್ಟು ಕಡಿಮೆ ವಿತರಿಸಲಾಗುತ್ತದೆ ಎಂಬ ಆರೋಪ ಹಿಂದಿನಿಂದಲೂ ಕೇಳಿ ಬಂದಿತ್ತು, ಈ ಬಗ್ಗೆ ನಾವು ಪರಿಶೀಲಿಸಲಿರಲಿಲ್ಲ,  ಆದರೆ ಕಳೆದ ಬಾರಿ ಬೇಳೆಯನ್ನು ವಿತರಿಸಿದವರು ತೂಕ ಮಾಡದೆ, ಅಂದಾಜಿನಲ್ಲಿ ಬೇಳೆಕೊಟ್ಟು ಕ್ಷಣಮಾತ್ರದಲ್ಲಿ ಬೇರೆ ಶಾಲೆಗಳಿಗೆ ತೆರಳಿದ್ದರು. ಈ ಬಾರಿ ಆಗಾಗಬಾರದೆಂದು ಲಾರಿ ಬರುವ ವೇಳೆಗೆ  ನಾವು ಶಾಲೆಯ ಬಳಿ ಇದ್ದು,  ನಾವು ಬೇಳೆಯನ್ನು ತೂಕ ಮಾಡಿದಾಗ ದಾಖಲೆಯಲ್ಲಿ ನೀಡಿದಕ್ಕಿಂತ ಕಡಿಮೆ ಬೇಳೆ ವಿತರಿಸಿರುವುದು ಕಂಡುಬಂದಿತು, ಇದೇ ರೀತಿ ಹಲವಾರು ವರ್ಷಗಳಿಂದ ಆಹಾರದ ದಾಸ್ತಾನನ್ನು ನೀಡುತ್ತಿದ್ದು ಇದರಿಂದ ಮಕ್ಕಳಿಗೆ ನೀಡುವ ಬೇಳೆಯ ಹಣವೆಲ್ಲಾ ಯಾರಿಗೆ ಹೋಗುತ್ತದೆ ಎಂದು ಪ್ರಶ್ನಿಸಿದರು. 
ಗಂಟಿಗನಹಳ್ಳಿ ಗ್ರಾಮಸ್ಥ ಉಮೇಶ್ ಮಾತನಾಡಿ, ಶಾಲೆಗಳಿಗೆ ಬಿಸಿಯೂಟ ಆರಂಭವಾದಾಗಿನಿಂದಲೂ  ಬೇಳೆ ನೀಡಲಾಗುತ್ತಿದೆ ಅದೇ ರೀತಿ ಅಕ್ಕಿ ಇನ್ನಿತರ ದಾಸ್ತಾನನ್ನು ವಿತರಿಸಲಾಗುತ್ತಿದೆ ಆಗಿನಿಂದಲೂ ಈಗಿನವರೆಗೆ ಎಷ್ಟು ಲಕ್ಷ ಟನ್ ದಾಸ್ತಾನನ್ನು ಅಕ್ರಮವಾಗಿ ಕೊಳ್ಳೆ ಹೊಡೆಯಲಾಗಿದೆ. ಮಕ್ಕಳಿಗೆ ನೀಡುವ ಆಹಾರದಲ್ಲೂ ಕಳವು ಮಾಡುತ್ತಿರುವ ಬಗ್ಗೆ ಸಂಬಂಧಿಸಿದ  ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ದೂರು ನೀಡಿದರೂ  ಸಮಸ್ಯೆ ಬಗೆಹರಿಯುತ್ತಿಲ್ಲ, ಸಕರ್ಾರ ಕೂಡಲೇ ಮಕ್ಕಳಿಗೆ ನೀಡುವಂತಹ ಆಹಾರದಲ್ಲೂ ಲೋಪವೆಸಗುವಂತಹವರ ವಿರುದ್ದ ಸೂಕ್ತ ಕ್ರಮಕೈಗೊಂಡು ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.
ಗ್ರಾಮಸ್ಥರು ತೂಕ ಪರಿಶೀಲಿಸುವಾಗ ಲಾರಿಯ ಜೊತೆಯಲ್ಲಿ ಬಂದಿದ್ದಂತಹ ವ್ಯಕ್ತಿ  ಹಾಗೂ ಚಾಲಕರಿಬ್ಬರು ಲಾರಿಯನ್ನು ಬಿಟ್ಟು ಜಾಗ ಖಾಲಿಮಾಡಿದ್ದರು. ಈ ಘಟನೆ ನಡೆದು ಹಲವು ಗಂಟೆ ಕಳೆದರು ಸಂಬಂಧಿಸಿದ ಅಧಿಕಾರಿಗಳಾಗಲಿ, ಆಹಾರ ಸರಬರಾಜು ಗುತ್ತಿಗೆಪಡೆದರಾಗಲಿ ಸ್ಥಳಕ್ಕೆ ಬಾರದಿರುವುದು ಗ್ರಾಮಸ್ಥರಲ್ಲಿ ಬೇಸರ ಉಂಟುಮಾಡಿತ್ತು. 
ಅಕ್ರಮಕ್ಕೆ ಅಧಿಕಾರಿಗಳೇ ಸಾಥ್ ಆರೋಪ:   ಹೆಸರು ಹೇಳಲು ಇಚ್ಚಿಸದಂತಹ ಕೆಲವು ಶಿಕ್ಷಕರುಗಳು ಮಾಧ್ಯಮದವರೊಂದಿಗೆ ಮಾತನಾಡಿ, ಇಡೀ ತಾಲ್ಲೂಕಿಗೆ ಸರಬರಾಜಗುತ್ತಿರುವ ಆಹಾರಧಾನ್ಯ ಕಡಿಮೆ ಸರಬರಾಜಾಗುತ್ತಿದ್ದು,  ಶಾಲೆಗಳ ಮಕ್ಕಳಿಗೆ ಅನುಗುಣವಾಗಿ ಆಹಾರ ಪದಾರ್ಥಗಳನ್ನು ಸಕರ್ಾರ ನೀಡಿದರೂ ಸರಬರಾಜು ಮಾಡುವ ಗುತ್ತಿಗೆದಾರರು  ಶಾಲೆಗೆ ಕಡಿಮೆ ಸರಬರಾಜು ಮಾಡುತ್ತಿದ್ದರು, ನಾವು ತೂಕಮಾಡುವವರನ್ನು  ಕೇಳಿದರೆ ನಾವು ಕೊಟ್ಟಷ್ಟು ಆಹಾರ ಪದಾರ್ಥಗಳನ್ನು ಪಡೆದುಕೊಳ್ಳಿ ಎಂದು ಗದರುತ್ತಾರೆ ಎಂದರಲ್ಲದೆ,  ಇದರಿಂದ ಮಕ್ಕಳಿಗೆ ಸರಿಯಾಗಿ ಮಧ್ಯಾಹ್ನದ ಬಿಸಿಯೂಟ ಮಾಡಲು ಸಾಧ್ಯವಾಗುತ್ತಿಲ್ಲ, ಈ ಬಗ್ಗೆ ನಾವೇ ಅಕ್ಕಪಕ್ಕದ ಶಾಲೆಗಳಲ್ಲಿ ಸಾಲದ ರೂಪದಲ್ಲಿ ಅಕ್ಕಿ ಬೇಳೆಗಳನ್ನು ತೆಗೆದುಕೊಳ್ಳುತ್ತಿದ್ದು ನಮಗೆ ಬಂದ ನಂತರ ಅದನ್ನು ಅವರಿಗೆ ಹಿಂತಿರುಗಿಸುವಂತ ಪರಿಸ್ಥಿತಿ ಇದ್ದು ನಾವು ಈ ಬಗ್ಗೆ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ, ಅಧಿಕಾರಿಗಳ  ಕೈಕೆಳಗೆ ಕೆಲಸ ಮಾಡುತ್ತಿರುವುದರಿಂದ ಅವರು ಮಾಡುವಂತಹ ಕೆಲವೊಂದು ಉದ್ದೇಶಪೂರ್ವಕ ಅಸಡ್ಡೆಗಳ ಬಗ್ಗೆ ಮಾತನಾಡುವಂತಿಲ್ಲವಾಗಿದೆ ಎಂದರು.