Saturday, June 15, 2013


ಸಿ.ಬಿ.ಸುರೇಶ್ಬಾಬುರವರಿಗೆ ಅಭಿನಂದನಾ ಸಮಾರಂಭ
ಚಿಕ್ಕನಾಯಕನಹಳ್ಳಿ,ಜೂ.15 : ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಗೊಂಡಿರುವ ಸಿ.ಬಿ.ಸುರೇಶ್ಬಾಬುರವರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಜೂನ್16ರಂದು (ಇಂದು) ಬೆಳಗ್ಗೆ 10.30ಕ್ಕೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.
ಹಂದನಕೆರೆ ಹೋಬಳಿಯ ಹುಲಿಕಮ್ಮನ ಬೆಟ್ಟದ ಶ್ರೀ ದುರ್ಗಮ್ಮನವರ ಸನ್ನಿದಿಯಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದು ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ನೌಕರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಕೋರಿದ್ದಾರೆ.

ತೋಟಗಾರಿಕೆಯು ರೈತರ ಜೀವನಾಡಿ 
ಚಿಕ್ಕನಾಯಕನಹಳ್ಳಿ,ಜೂ.15 : ತೋಟಗಾರಿಕೆಯು ರೈತರ ಜೀವನಾಡಿಯಂತೆ,  ಸದಾ ರೈತರ ಕೈ ಹಿಡಿಯುವುದರೊಂದಿಗೆ ಉತ್ತಮ ಫಸಲನ್ನು ನೀಡುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮೇಲ್ವಿಚಾರಕರಾದ ನಾಗರಾಜು ಹೇಳಿದರು.
            ತಾಲ್ಲೂಕಿನ ಕುಪ್ಪುರು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ತೋಟಗಾರಿಕಾ ಅಂತರ ಬೆಳೆಯಾಗಿ ನುಗ್ಗೆಯನ್ನು ಬೆಳೆಯುವಂತೆ ಕೃಷಿ ಸಲಹಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ತೋಟಗಾರಿಕಾ ಬೆಳೆಗಳಾದ ತೆಂಗು ,ಬಾಳೆ ,ಅಡಿಕೆ, ನುಗ್ಗೆ, ಮಾವು , ಪಪ್ಪಾಯಿ ಮುಂತಾದ ಬೆಳೆಗಳು ರೈತರನ್ನು ರಕ್ಷಿಸಿವೆ  ಹಾಗಾಗಿ ಮಿಶ್ರ ಬೆಳೆಯಾಗಿ ಭಾಗ್ಯ ತಳಿಯ ನುಗ್ಗೆಯನ್ನು ಬೆಳೆಯಿರಿ ಎಂದು ತಿಳಿಸಿದ ಅವರು ಪ್ರಗತಿಬಂದು ಸಂಘದ ಕೃಷಿಕರಿಗೆ ಮತ್ತು ಸಂಘದ ಸೇವಾಧಿಕಾರಿಗಳಿಗೆ ತೋಟದ ತಾಕುಗಳಿಗೆ ಭೇಟಿ ನೀಡಲು ಹಾಗೂ ಕೃಷಿ ಸಲಾಹ ಕಾರ್ಯಕ್ರಮಗಳ ಸಭೆಯಲ್ಲಿ ಭಾಗವಹಿಸುವಂತೆ ತಿಳಿಸಿದರು. 
ಕೊನೆಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕ ವಿಷಯ ತಜ್ಞರಾದ ನಾಗಪ್ಪದೇಸಾಯಿಯವರು ಮಾತನಾಡಿ ತೋಟಗಾರಿಕೆಯ ಬೆಳೆಯನ್ನು ಲಾಭದಾಯಕವಾಗಿನ್ನಾಗಿ ಮಾಡಬೇಕಾದರೆ ಮಣ್ಣು ಪರಿಕ್ಷೆ ಮಾಡಿಸಿ ಅದಕ್ಕೆ ಸೂಕ್ತ ಗೊಬ್ಬರಗಳನ್ನು ಪೂರೈಸುವುದು ಅಗತ್ಯ, ಅದರ ಜೊತೆಗೆ ವೈಜ್ಞಾನಿಕ ಬೇಸಾಯ ಪದ್ದತಿಗಳಾದ ಅಂತರ ಬೇಸಾಯ ಪದ್ದತಿ, ಹನಿ ನೀರಾವರಿ ಪದ್ಧತಿ, ಜೀವಾಣು ಗೊಬ್ಬರದ ಬಳಕೆ, ಮಿಶ್ರ ಬೇಸಾಯ ಪದ್ದತಿಯನ್ನು ಅಳವಡಿಸಿ ರಾಸಾಯನಿಕ ಗೊಬ್ಬರಗಳನ್ನು ಬಳಸಿಕೊಂಡು ತೋಟಗಾರಿಕ ಬೆಳೆಯನ್ನು ಲಾಭಧಾಯಕವಾಗಿಸಿಕೊಳ್ಳಬಹುದು ಎಂದರಲ್ಲದೆ ರೈತರ ಪ್ರಾತ್ಯಕ್ಷಿಕೆಯ ತಾಕುಗಳಿಗೆ ಬೇಟಿ ನೀಡಿ ಸುಧೀರ್ಘವಾಗಿ ಸುಮಾರು 3 ಗಂಟೆಗಳಕಾಲ ರೈತರುಗಳಿಗೆ ಹಾಗೂ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸೇವಾಪ್ರತಿನಿಧಿಗಳಿಗೆ ಮಾಹಿತಿ ವಿವರಿಸಿದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿಯಾದ ಎಸ್.ಹೆಚ್.ನಾಗಪ್ಪ ಕಾರ್ಯಕ್ರಮದಲ್ಲಿ ಮಾತನಾಡಿ 10 ಫಲಾನುಭವಿಗಳನ್ನು ಆಯ್ಕೆ ಮಾಡಿಕೊಂಡು ರೈತರುಗಳಿಗೆ ಮುಂಚೂಣಿ ಪ್ರಾತ್ಯಕ್ಷಿಕೆಯಾಗಿ ಬಿಡುಗಡೆ ಮಾಡುತ್ತಿದ್ದೇವೆ, ಇದರಲ್ಲಿ ತಮ್ಮಡಿಹಳ್ಳಿ, ಬೆನಕನಕಟ್ಟೆ, ಕುಪ್ಪೂರಿನ ಭಾಗದ ರೈತರು ಭಾಗ್ಯತಳಿಯ ನುಗ್ಗೆಯನ್ನು ನಮ್ಮ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಉಚಿತವಾಗಿ ಪಡೆಯುವುದರೊಂದಿಗೆ ಈ ಕಾರ್ಯಕ್ರಮದ ಉಪಯೋಗವನ್ನು ಪಡೆಯಲಿದ್ದಾರೆ ಎಂದು ತಿಳಿಸಿದರು. 
ಈ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸೇವಾ ಪ್ರತಿನಿಧಿಗಳಾದ ಆದರ್ಶ, ಚಂದ್ರಶೇಖರಯ್ಯ, ಸಂಘದ ಓಕ್ಕೂಟದ ಅಧ್ಯಕ್ಷರಾದ ಮಹೇಶ್, ಪ್ರಗತಿಬಂಧು ಸಂಘದ ಕೃಷಿಕರಾದ ಶಂಕರಲಿಂಗಪ್ಪ, ಓಂಕಾರಸ್ವಾಮಿ, ಅನಂತಪ್ಪ, ಶಿವಕುಮಾರಸ್ವಾಮಿ, ಬಸವರಾಜು, ವಿಜಯಕುಮಾರ್ ಮತ್ತಿತರರು ಉಪಸ್ತಿತರಿದ್ದು ರೈತರ ತಾಕುಗಳಿಗೆ ಭೇಟಿ ನೀಡುವುದರೊಂದಿಗೆ ಪ್ರಾಯೋಗಿಕ ಮಿಶ್ರ ಬೆಳೆಯ ಬಗ್ಗೆ ಹಾಗು ಮಣ್ಣು ಪರಿಕ್ಷೆಯನ್ನು ಕುರಿತು ತೋಟಗಾರಿಕಾ ಮಾಹಿತಿಯನ್ನು ಪಡೆದರು